ರೈತರ ಕಲ್ಯಾಣಕ್ಕಾಗಿ ಕೇಂದ್ರ ಸರ್ಕಾರದಿಂದ ಮತ್ತೊಂದು ಮಹತ್ವದ ಘೋಷಣೆ ಹೊರಬಂದಿದೆ. ಸುಮಾರು 24 ಸಾವಿರ ಕೋಟಿ ರೂಪಾಯಿ ವೆಚ್ಚದ ಕೃಷಿ ಸಂಬಂಧಿತ ಯೋಜನೆಗಳಿಗೆ ಅನುಮೋದನೆ ದೊರೆತಿದ್ದು, ದೇಶದ ಅನೇಕ ರೈತರಿಗೆ ಇದರಿಂದ ನೇರ ಪ್ರಯೋಜನವಾಗಲಿದೆ.

ಇತ್ತೀಚೆಗೆ ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಹಲವು ಪ್ರಮುಖ ನಿರ್ಧಾರಗಳು ಕೈಗೊಳ್ಳಲಾಯಿತು. ಕೃಷಿ ಕ್ಷೇತ್ರದ ಬಲವರ್ಧನೆಗಾಗಿ ರೂಪಿಸಲಾಗಿರುವ “ಪ್ರಧಾನ ಮಂತ್ರಿ ಧನ್-ಧಾನ್ಯ ಕೃಷಿ ಯೋಜನೆ” ಇದರಲ್ಲಿ ಪ್ರಮುಖವಾಗಿದೆ. ಈ ಯೋಜನೆ 2025-26ರಿಂದ ಪ್ರಾರಂಭವಾಗಿ ಆರು ವರ್ಷಗಳ ಕಾಲ ಜಾರಿಯಾಗಲಿದೆ.
ಸಂಪುಟ ಸಭೆಯ ನಂತರ ಕೇಂದ್ರ ಸಚಿವೆ ಅಶ್ವಿನಿ ವೈಷ್ಣವ್ ಮಾಹಿತಿ ನೀಡುತ್ತಾ, ದೇಶದ 100 ಜಿಲ್ಲೆಗಳನ್ನು ಆಯ್ಕೆಮಾಡಿ ಈ ಯೋಜನೆ ಜಾರಿಯಾಗಲಿದೆ ಎಂದರು. ಕಡಿಮೆ ಉತ್ಪಾದನೆ ಹೊಂದಿರುವ ಜಿಲ್ಲೆಗಳು, ಬೆಳೆ ತಿರುಗುವಿಕೆ ಕಡಿಮೆ ಇರುವ ಪ್ರದೇಶಗಳು ಹಾಗೂ ಸಾಲದ ಸೌಲಭ್ಯ ಕಡಿಮೆ ಇರುವ ಪ್ರದೇಶಗಳಿಗೆ ಆದ್ಯತೆ ನೀಡಲಾಗುವುದು.
ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು 2025ರ ಬಜೆಟ್‌ನಲ್ಲಿ ಘೋಷಿಸಿದ್ದ ಈ ಯೋಜನೆಯ ಉದ್ದೇಶ, ರೈತರ ಉತ್ಪಾದಕತೆ ಹೆಚ್ಚಿಸುವುದು, ಆಧುನಿಕ ಕೃಷಿ ವಿಧಾನಗಳನ್ನು ಪರಿಚಯಿಸುವುದು ಮತ್ತು ಸಾಲ-ಸೌಲಭ್ಯ ಸುಲಭಗೊಳಿಸುವುದು.
ಯೋಜನೆಯ ಪ್ರಮುಖ ಅಂಶಗಳು:
- ಸುಧಾರಿತ ಬೀಜಗಳು ಮತ್ತು ರಸಗೊಬ್ಬರ ರೈತರಿಗೆ ಕಡಿಮೆ ದರದಲ್ಲಿ ಅಥವಾ ಉಚಿತವಾಗಿ ಲಭ್ಯವಾಗಲಿವೆ.
- ಟ್ರ್ಯಾಕ್ಟರ್, ಪಂಪ್ ಹಾಗೂ ಇತರ ಆಧುನಿಕ ಯಂತ್ರೋಪಕರಣಗಳ ಮೇಲೆ ಅನುದಾನ (ಸಬ್ಸಿಡಿ) ದೊರೆಯಲಿದೆ.
- ಸೂಕ್ಷ್ಮ ನೀರಾವರಿ ವ್ಯವಸ್ಥೆಗಳ ಮೂಲಕ ನೀರಿನ ಬಳಕೆ ಸಮರ್ಪಕವಾಗಲಿದೆ.
- ಬೆಳೆ ವೈವಿಧ್ಯೀಕರಣಕ್ಕೆ ಪ್ರೋತ್ಸಾಹ ದೊರೆತು ರೈತರ ಆದಾಯ ಹೆಚ್ಚಲಿದೆ.
- ಗೋದಾಮು ಹಾಗೂ ಸಂಗ್ರಹಣಾ ವ್ಯವಸ್ಥೆ ಸುಧಾರಣೆ.
- ಸುಲಭ ಸಾಲ ಸೌಲಭ್ಯದಿಂದ ಆರ್ಥಿಕ ಒತ್ತಡ ಕಡಿಮೆಯಾಗಲಿದೆ.
ಇದಲ್ಲದೆ, ಮಹಿಳಾ ರೈತರು ಮತ್ತು ಯುವಕರಿಗೆ ವಿಶೇಷ ಆದ್ಯತೆ ನೀಡಲಾಗುವುದು. ರೈತರು ತಮ್ಮ ಆಧಾರ್ ಕಾರ್ಡ್, ಬ್ಯಾಂಕ್ ಖಾತೆ ಮತ್ತು ಭೂ ದಾಖಲೆಗಳೊಂದಿಗೆ ಹತ್ತಿರದ ಕೃಷಿ ಕಚೇರಿಯಲ್ಲಿ ಅಥವಾ ಆನ್‌ಲೈನ್ ಮೂಲಕ ನೋಂದಣಿ ಮಾಡಿಕೊಳ್ಳಬಹುದು.
ಈ ಯೋಜನೆಯನ್ನು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಜಂಟಿಯಾಗಿ ಜಾರಿಗೊಳಿಸಲಿದ್ದು, 2025ರ ಅಕ್ಟೋಬರ್ ಒಳಗೆ ಎಲ್ಲ ಆಯ್ಕೆಯಾದ ಜಿಲ್ಲೆಗಳಲ್ಲಿ ಪೂರ್ಣ ಪ್ರಮಾಣದಲ್ಲಿ ಜಾರಿಗೆ ತರುವ ಗುರಿ ಹೊಂದಲಾಗಿದೆ.